ಬೆಳಗಿತು ಕನ್ನಡ ದೀಪ, ಮೊಳಗಿತು ಕರುನಾಡ ಕಹಳೆ

ಬೆಂಗಳೂರು: ಸೊಬಗಿನ ಸಂಜೆಯಲ್ಲಿ ಬೆಳಗಿತು ಕನ್ನಡ ದೀಪ, ಮೊಳಗಿತು ಕರುನಾಡ ಕಹಳೆ. ಮಕ್ಕಳ ನೃತ್ಯ, ಹಿರಿಯರ ಹಾಡಿನ ಪಾರುಪತ್ಯ, ನವಯುಗದ ಡಾನ್ಸ್ ಗೂ ಕನ್ನಡದ ಕಂಪಿನ ಸ್ಪರ್ಶ. ಆದ್ದರಿಂದಲೇ ರಾಜ್ಯೋತ್ಸವ ಮಾಸದ ಸಂಭ್ರಮಾಚರಣೆಯಲ್ಲಿ ಹೊಮ್ಮಿತು ಇಮ್ಮಡಿ ಹರ್ಷ.

ಇಂಥ ಕನ್ನಡೋತ್ಸವದ ಉತ್ಸಾಹ ಕಾಣಿಸಿದ್ದು ವಿಠಲ್ ನಗರದಲ್ಲಿ ಕಳೆದ ರಾತ್ರಿ. ನಾಡಿನ ಹೆಮ್ಮೆಯ ಕವಿಗಳು ರಚಿಸಿದ ಗೀತೆಗಳಿಗೆ ಗರುಡ ನಾಟ್ಯ ಸಂಘದ ಪುಟಾಣಿ ಕಲಾವಿದರು ನೃತ್ಯದ ಬೆಡಗು ನೀಡಿದರು. ಭರತನಾಟ್ಯ ಪಟು ರಘುನಂದನ್ ಪರಿಣತಿಪೂರ್ಣ ನಾಟ್ಯ ಪ್ರದರ್ಶನ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿತು.

ಸಂಸ್ಕೃತಿಯ ಬಿಂಬದ ಜತೆಗೆ ಕಾಲಕ್ಕೆ ಹೊಂದಿಕೊಂಡು ಹೊಸತನ್ನು ಕೂಡ ಕನ್ನಡಿಕರಿಸುವ ಪ್ರಯತ್ನವೂ ಇದೇ ವೇದಿಕೆಯಲ್ಲಿ ನಡೆಯಿತು. ಸೋಸಿಯೊ ಫಿಟ್ನೆಸ್ ಕಲಾವಿದೆಯರು ಕನ್ನಡದ ಹಾಡುಗಳಿಗೆ ಜುಂಬಾ ಡಾನ್ಸ್ ಹೊಳಪಿನ ಪ್ರಭಾವಳಿ ಕಟ್ಟಿಕೊಟ್ಟರು. ಶಿವಗಂಗಾ ನಾಟ್ಯಾಲಯದ ಯುವತಿಯರು ಆಕರ್ಷಕ ಭಾವಭಂಗಿಯೊಂದಿಗೆ ಅನಾವರಣಗೊಳಿಸಿದ ಕನ್ನಡ ಶಿವಾರಾಧನೆಯ ಸೌಂದರ್ಯವಂತೂ ಮುದಗೊಳಿಸುವಂಥದ್ದಾಗಿತ್ತು.