ನೃತ್ಯ ಸಾಗರದಲ್ಲಿ ಭಕ್ತಿಯ ಸಾರ

ಹಬ್ಬದ ದಿನ ಅಬ್ಬರದ ಮಳೆ, ಭಕ್ತಿಯ ಸಾಗರವಾಗುವಂಥ ನೃತ್ಯ ನೋಡುವ ಕಾತರದಲ್ಲಿ ಕಾಯ್ದಿದ್ದವರು ಸಾವಿರಾರು. ಅವರ ಮನದಾಳವನ್ನು ಅರಿತನೇನೋ ವರುಣದೇವ! ಅಬ್ಬರಿಸಿ ಅಷ್ಟೇ ಬೇಗ ತಣ್ಣಗಾದ. ಅತ್ತ ನೀರು ಸರಸರ ಇಳಿಜಾರಿನ ಕಡೆಗೆ ಹರಿಯಿತು. ಇತ್ತ ಅಂಬೆಯ ಆರಾಧಕರ ಮನವು ಭಕ್ತಿಪೂರ್ಣ ನೃತ್ಯ ಪ್ರದರ್ಶನದ ಕಡೆಗೆ ಹರಿಯಿತು.

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿ, ಅರಳಿಯ ಮರದ ಎಲೆಯಂಚಿನಿಂದ ಜಾರಿ ಬಿದ್ದಾಗ ಮೈಮನ ಪುಳಕಿತ. ಕೈಮುಗಿದು ಶಕ್ತಿ ಮಾತೆಯ ಭಕ್ತಿ ಸಾಗರದಲ್ಲಿ ಒಂದಾಗುವ ಹೊತ್ತಿಗೆ ಹಕ್ಕಿಗಳು ಕೂಡ ಹಾಡಿ ಗೂಡು ಸೇರಿಯಾಗಿತ್ತು. ವರುಣನ ಅಬ್ಬರ ಮುಗಿದು ಪ್ರಕೃತಿಯ ಸಂಗೀತ ಕಚೇರಿಯೂ ಮೌನ; ಸೂರ್ಯ ಬಾನಂಚಿನ ತೆರೆಯಮರೆಗೆ ಸರಿಯುವ ಆ ಹೊತ್ತಿನಲ್ಲಿ ಅಂಬೆಯ ಸನ್ನಿಧಿಯಲ್ಲಿ ಅಲಕೃತವಾದ ರಂಗದ ಪರದೆ ಮೇಲೆದ್ದಿತು. ಅಲ್ಲಿ ತೆರೆದುಕೊಂಡಿತು ದೇವಿಯ ಹತ್ತಾರು ರೂಪಗಳ ವೈಭವದ ಚಿತ್ತಾರ.

ಇಂಪಾದ ರಾಗದ ಜೊತೆಗೆ ತಾಳದ ಮೇಳ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಸುಂದರಾಂಗಿಯರ ಸುಂದರ ಮೊಗದಲ್ಲಿಯೂ ದೈವಕಳೆ. ಅವರೆಲ್ಲರೂ ರಂಗದ ಮೇಲೆ ಭಾವ-ಭಂಗಿಯಿಂದ ದೇವಿಯ ಪ್ರತಿರೂಪ ವಾಗಿ ನಿಂತರು. ಅದೆಷ್ಟೊ ಹೊತ್ತು ಬಣ್ಣ-ಬೆಳಕಿನ ಆಟದ ನಡುವೆ ಭವಾನಿಯ ವೈಭವದ ರಸಾಮೃತ ಸಾರವೇ ಅಲ್ಲಿ ಹರಿಯಿತು. ಚಿತ್ತವನು ಅತ್ತಿತ್ತ ಕದಲಿಸದೇ; ಸ್ತಬ್ಧ ಚಿತ್ರಗಳಂತೆ ಕುಳಿತ ಪ್ರೇಕ್ಷಕರ ಕಂಗಳ ತುಂಬಾ ಭಕ್ತಿಯ ಹೊಳಪು ಅಪಾರ.

ಕಾಲ ಉರುಳಿದ್ದೇ ಅರಿವಾಗಲಿಲ್ಲ. ಹೌದು; ಜಗತ್ಪಾಲಿನಿಯ ಮಹಿಮೆಯನ್ನು ಹಾಡಿ, ಕೊಂಡಾಡಿ, ನಲಿದಾಡುವಾಗ ಹೊತ್ತು ಕಳೆಯಿತೆಂದು ಯೋಚಿಸಲಾದರೂ ಹೇಗೆ ಸಾಧ್ಯ? ಜಗದಂಬೆಯ ಅವತಾರಗಳು ತೆರೆ ತೆರೆಯಾಗಿ ಹರಿದು ಬಂದು ಹೃದಯ ಕಡಲ ಅಂಚಿಗೆ ಅಪ್ಪಳಿಸುವಾಗ ಬೇರೆ ಯೋಚನೆಯ ಸುಳಿದಾಟವೇ ಇಲ್ಲ. ಎಲ್ಲವೂ ಮಾಯ; ಅದೇ ಭಕ್ತಿಯ ಮಾಯೆ!

ಇಂತಹದೊಂದು ಭಕ್ತಿಯ ಸಾರವು ನೃತ್ಯ ಸಾಗರ ಮಂಥನದಿಂದ ಹೊರಹೊಮ್ಮಿತು. ಅದೇ ‘ಅಂಬಾ ಭವಾನಿ ವೈಭವ’ದ ಅಮೃತಧಾರೆ. ಈ ನೃತ್ಯಾಮೃತ ಧಾರೆಯನ್ನು ಹರಿಸಿದ್ದು ‘ಗರುಡ ನಾಟ್ಯ ಸಂಘ’ದ ಪ್ರತಿಭಾವಂತ ಯುವ ಕಲಾವಿದರು. ಕುಮಾರಸ್ವಾಮಿ ಬಡಾವಣೆಯಲ್ಲಿನ ‘ಶ್ರೀ ಅಂಬಾ ಭವಾನಿ ದೇವಸ್ಥಾನ’ದಲ್ಲಿ ನಡೆದ ದೇವಿ ವರ್ಣನೆಯ ನೃತ್ಯ ಕಾರ್ಯಕ್ರಮವು ಪ್ರೇಕ್ಷಕರಿಗೆ ಮುದ ನೀಡಿತು.

ಭರತ ನಾಟ್ಯ ಹಾಗೂ ಸಮಕಾಲೀನ ನೃತ್ಯ ಮೇಳೈಸಿದ ‘ಕಾಂಟೆಂಪರರಿ ಕ್ಲಾಸಿಕಲ್’ ಶೈಲಿಯಲ್ಲಿ ಪ್ರಸ್ತುತಪಡಿಸಿದ ಅಂಬಾ ಭವಾನಿ ವೈಭವ ನೃತ್ಯವು ಸುಮಾರು ಒಂದೂವರೆ ತಾಸು ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತು. ಫ್ಯೂಷನ್ ಸಂಗೀತದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ನೃತ್ಯ ನೋಡುವುದು ಎಷ್ಟೊಂದು ಸೊಗಸು ಎನ್ನುವ ಅನುಭವವಾಯಿತು.

"ಗರುಡ ನಾಟ್ಯ ಸಂಘ"ದ ನೃತ್ಯ ಕಲಾವಿದರಾದ ಶೋಭಾ ಎಂ. ಲೋಲನಾಥ್, ರಘುನಂದನ್. ಎಸ್, ಸಾಕೇತ ಕೃಷ್ಣ, ಲತಾ ಎಸ್. ರಾವ್, ಡಾ.ಅಮ್ಮು, ದಿವ್ಯಾ ರಘುರಾಮ್, ಹಿಮಾ ದೇವೀರಪ್ಪ, ಸುಪ್ರಿಯಾ ದೇವೀರಪ್ಪ, ಖುಶಿ ಪ್ರಶಾಂತ್ ಹಾಗೂ ಹರಿಣಿ ಪುರುಷೋತ್ತಮ್ ಅವರು ಪರಿಣತಿಯೊಂದಿಗೆ ಚೊಕ್ಕದಾದ ರೀತಿಯಲ್ಲಿ "ಶ್ರೀ ಅಂಬಾ ಭವಾನಿ ವೈಭವ"ವನ್ನು ರಂಗದ ಮೇಲೆ ಪ್ರದರ್ಶಿಸಿದರು. ಕುಣಿಗಲ್ ಶಾಸಕರಾದ ಬಿ.ಬಿ. ರಾಮಸ್ವಾಮಿ ಗೌಡ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿನಿಮಾ ಹಾಗೂ ಟೆಲಿವಿಷನ್ ನಿರ್ದೇಶಕ ರಾಜು ಮೋಕಾಶಿ ಹಾಗೂ ಕಿರುತೆರೆ ನಟ ವಿಷ್ಣು ಪ್ರಸನ್ನ ಅವರು ಸಮಾರಂಭಕ್ಕೆ ಕಳೆಕಟ್ಟಿದರು.