ಅಂಬೆಯ ಸನ್ನಿಧಿಯಲ್ಲಿ ನೃತ್ಯ ಕಾರ್ಯಕ್ರಮ

ಸೂರ್ಯ ಬಾನಂಚಿನ ತೆರೆಯ ಮರೆಗೆ ಸರಿಯುವ ಹೊತ್ತಿನಲ್ಲಿ ಅಂಬೆಯ ಸನ್ನಿಧಿಯಲ್ಲಿ ಅಲಂಕೃತವಾದ ರಂಗದ ಮೇಲೆ ಅನಾವರಣ ಗೊಳ್ಳುವವು ದೇವಿಯ ಹತ್ತಾರು ರೂಪಗಳ ವೈಭವದ ಚಿತ್ತಾರ.

ಇಂಪಾದ ರಾಗದ ಜೊತೆಗೆ ತಾಳದ ಮೇಳ. ಗೆಜ್ಜೆ ಕಟ್ಟಿ ಹೆಜ್ಜೆ ಹಾಕುವ ಸುಂದರಾಂಗಿಯರ ಸುಂದರ ಮೊಗದಲ್ಲಿಯೂ ದೈವಕಳೆ ಮೂಡುವಂಥ ಸೊಬಗು. ರಂಗದ ಮೇಲೆ ಭಾವ-ಭಂಗಿಯಿಂದ ದೇವಿಯ ಪ್ರತಿರೂಪವಾಗಿ ನಿಂತು ದೇವಿ ಆರಾಧಕರನ್ನು ಭಕ್ತಿ ಸಾಗರದಲ್ಲಿ ಸೆಳೆದೊಯ್ಯುವುದೇ ಈ ಎಲ್ಲ ಕಲಾವಿದೆಯರ ಆಶಯ. ಬಣ್ಣ-ಬೆಳಕಿನ ಆಟದ ನಡುವೆ ಭವಾನಿಯ ವೈಭವದ ರಸಾಮೃತ ಸಾರವೇ ಹರಿಯಬೇಕೆನ್ನುವುದು ತುಡಿತ ಹಾಗೂ ಮಿಡಿತ.

ಇಂತಹದೊಂದು ಭಕ್ತಿಯ ಸಾರವು ನೃತ್ಯ ಸಾಗರ ಮಂಥನದಿಂದ ಹೊರಹೊಮ್ಮಲಿದೆ. ಅದೇ "ಅಂಬಾ ಭವಾನಿ ವೈಭವ"ದ ಅಮೃತಧಾರೆ. ಈ ನೃತ್ಯಾಮೃತ ಧಾರೆಯನ್ನು ಹರಿಸಲಿರುವವರು "ಗರುಡ ನಾಟ್ಯ ಸಂಘ"ದ ಪ್ರತಿಭಾವಂತ ಯುವ ಕಲಾವಿದೆಯರು.

ಸುಮಾರು ನಲ್ವತ್ತು ವರ್ಷಗಳ ದೀರ್ಘ ಇತಿಹಾಸ ಹೊಂದಿರುವ "ಗರುಡ ನಾಟ್ಯ ಸಂಘ"ದ ಹೊಸ ತಲೆಮಾರಿನ ಕಲಾವಿದರು ಇದೇ ಶನಿವಾರ(1ನೇ ಅಕ್ಟೋಬರ್, 2011)ದಂದು ನಗರದ ಕುಮಾರಸ್ವಾಮಿ ಬಡಾವಣೆಯ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ "ಅಂಬಾ ಭವಾನಿ ವೈಭವ" ನೃತ್ಯ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ.

ಭರತ ನಾಟ್ಯ ಹಾಗೂ ಕಾಂಟೆಂಪರರಿ ನೃತ್ಯವನ್ನು ಮೇಳೈಸಿದ "ಕಾಂಟೆಂಪರರಿ ಕ್ಲಾಸಿಕಲ್" ಶೈಲಿಯಲ್ಲಿ ಪ್ರಸ್ತುತಪಡಿಸುವ ಅಂಬಾ ಭವಾನಿ ವೈಭವ ನೃತ್ಯವು ಸುಮಾರು ಒಂದೂವರೆ ತಾಸು ನೋಡುಗರಿಗೆ ರಸದೌತಣ ನೀಡಲಿದೆ. "ಫ್ಯೂಜನ್" ಸಂಗೀತದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ನೃತ್ಯ ಸೊಬಗನ್ನು ಶೋಭಾ ಎಂ. ಲೋಲನಾಥ್ ಹಾಗೂ ರಘುನಂದನ್ ನೇತೃತ್ವದ ಕಲಾವಿದ ಬಳಗವು ತಮ್ಮ ಕಲಾ ಕೌಶಲದಿಂದ ಪ್ರದರ್ಶಿಸಲಿದೆ.

ದೇವಿಯ ವಿವಿಧ ರೂಪಗಳನ್ನು ಪ್ರೇಕ್ಷಕರೆದುರು ಸಾದರಪಡಿಸುವ ಈ ನೃತ್ಯ ಕಾರ್ಯಕ್ರಮವು ಶನಿವಾರ(1ನೇ ಅಕ್ಟೋಬರ್, 2011)ದಂದು ರಾತ್ರಿ 7.00 ಗಂಟೆಗೆ ಆರಂಭವಾಗಲಿದೆ. ಕುಣಿಗಲ್ ಶಾಸಕ ಶ್ರೀ ಬಿ.ಬಿ. ರಾಮಸ್ವಾಮಿ ಗೌಡ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಸಿನೀಮಾ ಹಾಗೂ ಟೆಲಿವಿಷನ್ ನಿರ್ದೇಶಕ ರಾಜು ಮೋಕಾಶಿ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.