ಪಂಡಿತ್ ದತ್ತಾತ್ರೇಯ ಗರುಡ ನಿಧನ

ಬೆಂಗಳೂರು: ಕರ್ನಾಟಕದ ಖ್ಯಾತ ಸಂಗೀತ ಕಲಾವಿದರು ಹಾಗೂ ಸಂಗೀತ ಗುರು ಪಂಡಿತ್ ದತ್ತಾತ್ರೇಯ ಗರುಡ (97 ವರ್ಷ) ಅವರು ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ನಾಲ್ವರು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ.

ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದತ್ತಾತ್ರೇಯ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ಕೊನೆಯುಸಿರು ಎಳೆದರು. "ನಾಟಕಾಲಂಕಾರ ಸದಾಶಿವರಾವ್ ಗರುಡ" ಅವರ ಹಿರಿಯ ಪುತ್ರರಾದ ದತ್ತಾತ್ರೇಯ ಅವರು ಕರ್ನಾಟಕ ನಾಟಕ ಮತ್ತು ಸಂಗೀತ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದರು. ಇತ್ತೀಚೆಗಷ್ಟೇ ಚೌಡಯ್ಯ ಪ್ರಶಸ್ತಿಯಿಂದಲೂ ಪುರಸ್ಕೃತರಾಗಿದ್ದರು.

ಸಂಗೀತ ಗುರುವಾಗಿ ಸಾವಿರಾರು ಕಲಾ ಆಸಕ್ತರಿಗೆ ಸಂಗೀತ ಜ್ಞಾನವನ್ನು ನೀಡಿದ್ದ ದತ್ರಾತ್ರೇಯ ಅವರು ತಮ್ಮ ಬದುಕಿನ ಕೊನೆಯ ಕ್ಷಣದಲ್ಲಿಯೂ ಸಂಗೀತದ ಧ್ಯಾನದಲ್ಲಿಯೇ ಲೀನರಾಗಿದ್ದರು. ದೇಶದ ಖ್ಯಾತ ಗಾಯಕರ ಕಚೇರಿಗಳಲ್ಲಿ ತಬಲಾ ಸಾಥ್ ನೀಡಿದ್ದ ದತ್ತಾತ್ರೇಯ ಅವರು ಸಂಗೀತವೇ ಬದುಕಿಗೆ ಉತ್ಸಾಹದ ಅಮೃತವಾಗಬೇಕು ಎನ್ನುವ ಆಶಯದೊಂದಿಗೆ ಪುಸ್ತಕಗಳನ್ನು ಕೂಡ ಬರೆದು ಪ್ರಕಟಿಸಿದ್ದರು.

ದತ್ತಾತ್ರೇಯ ಗರುಡ ಅವರ ನಿಧನಕ್ಕೆ ಗರುಡ ನಾಟ್ಯ ಸಂಘದ ಕಲಾವಿದರು ಸಂತಾಪ ಸೂಚಿಸಿದ್ದಾರೆ. "ಸಂಗೀತವನ್ನೇ ಆರಾಧಿಸಿ ಋಷಿಯಂತೆ ಬದುಕು ನಡೆಸಿ ಆದರ್ಶದ ಹಾದಿ ತೋರಿಸಿಕೊಟ್ಟ ದತ್ತಾತ್ರೇಯ ಅವರ ಅಗಲಿಕೆಯಿಂದ ಕಲಾ ಜಗತ್ತಿಗೆ ತುಂಬಲಾಗದ ನಷ್ಟವಾಗಿದೆ" ಎಂದು ಗರುಡ ನಾಟ್ಯ ಸಂಘದ ಕಾರ್ಯದರ್ಶಿ ಶೋಭಾ ಎಂ.ಲೋಲನಾಥ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.