ರಾಜಕೀಯ ವಿಡಂಬನೆಯ ಗೊಂಬೆ ಆಟ

ಮತ ಹಾಕಿ ತಮ್ಮನ್ನು ಆಯ್ಕೆ ಮಾಡಿದ ಜನರನ್ನು ರಾಜಕಾರಣಿಗಳು ಆನಂತರ ಕತ್ತೆಗಳು ಎನ್ನುವಂತೆ ನೋಡುತ್ತಾರೆ. ಹಲವಾರು ಸಂದರ್ಭದಲ್ಲಿ ತಿಳುವಳಿಕೆ ಇಲ್ಲದ ಕತ್ತೆಗಳು ಈ ಜನವೆಂದು ಮೂರ್ಖರನ್ನಾಗಿ ಮಾಡಲು ಪ್ರಯತ್ನ ಮಾಡುತ್ತಾರೆ. ಆದರೆ ಅದೇ ಜನರು ನ್ಯಾಯಾಧೀಶರಾಗಿ ನಿಂತರೆ ರಾಜಕಾರಣಿಗಳ ಸ್ಥಿತಿ ಏನಾಗುತ್ತದೆ? ಈ ಪ್ರಶ್ನೆಗೆ ಉತ್ತರ ನೀಡುತ್ತದೆ "ಗರುಡ ನಾಟ್ಯ ಸಂಘ" ಹಾಗೂ "ಗೊಂಬೆ ಮನೆ" ಪ್ರದರ್ಶಿಸುವ ರಾಜಕೀಯ ವಿಡಂಬನೆಯ ಗೊಂಬೆ ಆಟ "ಗಾರ್ದಭ ಮನುಷ್ಯ" ಪ್ರದರ್ಶನ.

ರಜನಿ ಹಾಗೂ ಪ್ರಕಾಶ ಗರುಡ ನೇತೃತ್ವದಲ್ಲಿ ಸಿದ್ಧಗೊಂಡಿರುವ "ಗಾರ್ದಭ ಮನುಷ್ಯ" ಗೊಂಬೆ ಆಟವು ಸದ್ಯದ ರಾಜಕೀಯ ಪರಿಸ್ಥಿತಿಯನ್ನು ವಿಡಂಬನೆ ಮಾಡುತ್ತದೆ. ಅಣ್ಣಾ ಹಜಾರೆ ಅವರ ಹೋರಾಟವನ್ನು ಆರಂಭದಲ್ಲಿ ರಾಜಕಾರಣಿಗಳು ನೋಡಿದ ರೀತಿಯನ್ನು ಹಾಗೂ ಆನಂತರ ಈ ಹೋರಾಟವು ಜನಾಂದೋಲನವಾಗಿ ರಾಜಕಾರಣಿಗಳನ್ನೇ ಬೆದರಿಸಿದ ರೀತಿಯನ್ನು "ಗಾರ್ದಭ ಮನುಷ್ಯ" ಪ್ರದರ್ಶನವು ಸರಳವಾಗಿ ಹಾಗೂ ಆಕರ್ಷಕವಾದ ರೀತಿಯಲ್ಲಿ ತಿಳಿಸುತ್ತದೆ.

ಜನರನ್ನು ಕತ್ತೆಗಳು ಎನ್ನುವಂತೆ ಭಾವಿಸಬೇಡಿ; ಅವರೇ ಕೊನೆಯಲ್ಲಿ ನ್ಯಾಯಾಧೀಶರಾಗುತ್ತಾರೆ. ಅವರೇ ನಿಮ್ಮ ರಾಜಕೀಯ ಭವಿಷ್ಯವನ್ನು ತೀರ್ಮಾನಿಸುವ ನಿರ್ಣಾಯಕ ಶಕ್ತಿ ಅಗುತ್ತಾರೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ರಾಜಕಾರಣಿಗಳಿಗೆ ನೀಡುವ "ಗಾರ್ದಭ ಮನುಷ್ಯ" ಗೊಂಬೆ ಆಟವು ಮಕ್ಕಳಿಗೆ ಮಾತ್ರವಲ್ಲ ಹಿರಿಯರಿಗೂ ಇಷ್ಟವಾಗುವಂಥದು.

ರಂಜನೆಯ ಉದ್ದೇಶದ ಜೊತೆಗೆ ಸಮಾಜಕ್ಕೆ ಒಳಿತಾಗುವಂಥ ಸಂದೇಶವನ್ನು ನೀಡುವ ಈ ಗೊಂಬೆ ಪ್ರದರ್ಶನವು ಮಂಗಳವಾರ (30ನೇ ಆಗಸ್ಟ್ 2011) ನಗರದ ಬಸವನಗುಡಿಯ ಬಿ.ಪಿ.ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಡ್ಲ ಕಲ್ಚರ್ ಸಭಾಂಗಣದಲ್ಲಿ ಸಂಜೆ 6.45ಕ್ಕೆ ನಡೆಯಲಿದೆ. ಅಂತರರಾಷ್ಟ್ರೀಯ ಹ್ಯೂಮರ್ ಕ್ಲಬ್ ಸ್ಥಾಪಕ ಅಧ್ಯಕ್ಷ ವೈ.ಎಂ.ಎನ್. ಮೂರ್ತಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.


"ಗಾರ್ದಭ ಮನುಷ್ಯ"
(ಅವಧಿ 60 ನಿಮಿಷ)
ಮೂಲ: ಮಧ್ಯ ಏಶೀಯಾದ ಜನಪದ ಕಥೆ
ರಂಗರೂಪ: ನಟರಾಜ ಹೊನ್ನವಳ್ಳಿ
ಗೊಂಬೆಗಳ ವಿನ್ಯಾಸ: ಅಜಿತ ರಾವ್, ಮುಂಬಯಿ
ಸಂಗೀತ: ನಾಗರಾಜ ಹೆಗಡೆ
ನೆರಳು ಗೊಂಬೆ ಪರಿಕಲ್ಪನೆ ನಿರ್ದೇಶನ: ಡಾ. ಪ್ರಕಾಶ ಗರುಡ

ಈ ನೆರಳು ಗೊಂಬೆ ಆಟವು ಕರ್ನಾಟಕದ ಪಾರಂಪರಿಕ ತೊಗಲು ಗೊಂಬೆ ಆಟಗಾರರು, ಆಧುನಿಕ ಚಿತ್ರ ಕಲಾವಿದರ ಸಹಯೋಗದಲ್ಲಿ ಸಿದ್ಧಗೊಂಡಿದೆ ಪಾರಂಪರಿಕ ತೊಗಲು ಗೊಂಬೆಳ ವಿನ್ಯಾಸದ ಜೊತೆಗೆ ಕಾರ್ಟೂನ್ ಚಿತ್ರಕಲೆ, ಮೊಗಲ್ ಮಿನಿಯೇಚರ್ ಚಿತ್ರಕಲೆ ಇವುಗಳ ವಿನ್ಯಾಸ, ವರ್ಣಗಳನ್ನು ಮೇಳೈಸಿದ ಒಂದು ತಾಸಿನ ಈ ಕಥೆಗೆ ಸುಮಾರು 35 ಗೊಂಬೆಳನ್ನು ರಚಿಸಲಾಗಿದೆ. ಕಥೆಯ ನಿರೂಪಣೆ, ದೃಶ್ಯೀಕರಣ, ಸಂಗೀತ, ಬೆಳಕಿನ ವಿನ್ಯಾಸ ಈ ಅಂಶಗಳಲ್ಲಿ ಹೊಸ ಪ್ರಯೋಗ ಮಾಡಲಾಗಿದೆ.

ಸಂತಾನ ಭಾಗ್ಯವಿಲ್ಲದ ಅಗಸ ಮುಲ್ಲಾನಿಗೆ ಸಾಕಿದ ಕತ್ತೆ "ಆಳೂ" ಆಗಿದೆ "ಮಗ"ನೂ ಆಗಿದೆ ಪಂಡಿತೋತ್ತಮ ಮೌಲ್ವಿಯ ಮಾತಿಗೆ ಮರುಳಾದ ಅಗಸ, ಕತ್ತೆಯನ್ನು "ಮನುಷ್ಯ"ನನ್ನಾಗಿ ಮಾಡಲು ಶಕ್ಯವಿದೆ. ಎಂದು ನಂಬಿ ಮೌಲ್ವಿಗೆ ಕತ್ತೆಯನ್ನೂ ಜತೆಗೆ ಕೈ ತುಂಬ ಹಣವನ್ನೂ ತೆತ್ತು ಬರುತ್ತಾನೆ. ಆರು ತಿಂಗಳು ಕಳೆದ ಮೇಲೆ ಅಗಸ ಅಗಸಗಿತ್ತಿ ಆಸೆಯಿಂದ ಮೌಲ್ವಿಯನ್ನು ಹೋಗಿ ಕಾಣುತ್ತಾರೆ. ತನ್ನಿಂದಾಗಿ "ಮನುಷ್ಯ"ನಾಗಿರುವ ಆ ಕತ್ತೆ ಇಗ ವಾರಣಾಸಿಯ ನ್ಯಾಯಾಲಯದಲ್ಲಿ "ಖಾಜಿ" ಆಗಿದ್ದಾನೆಂದು ಮೌಲ್ವಿ ಹೇಳಿದ್ದನ್ನು ನಂಬಿ ದಂಪತಿಗಳು ಕಂಡರಿಯದ ಆ ಪಟ್ಟಣಕ್ಕೆ "ಮಗ"ನನ್ನು ಕಾಣಲು ಧಾವಿಸುತ್ತಾರೆ. ಅವರ "ಕತ್ತೆ" ಅಲ್ಲಿ "ನ್ಯಾಯಾಧೀಶ"ನಾಗಿದ್ದಾನೆ.? "ನ್ಯಾಯಾಧೀಶ"ನಾಗಿ ಇವರನ್ನು ಆತ ಹೇಗೆ ಕಂಡ? "ಮನುಷ್ಯ" ರೂಪಿ "ಕತ್ತೆ" ಅಥವಾ "ಕತ್ತೆ" ರೂಪಿ "ಮನುಷ್ಯ"ನಿಂದ ನಾವು ಕಲಿಯುವ ಪಾಠ ಏನು? ಇದು ಈ ಗೊಂಬೆ ಆಟದ ಕುತೂಹಲಕಾರಿ ಕಥೆ. ಪ್ರಹಸನ ಮಾದರಿಯ ಈ ಆಟದಲ್ಲಿ ಬರುವ ಅನಿರೀಕ್ಷಿತ ಘಟನೆಗಳು ಮಕ್ಕಳಿಗೆ ಆಪ್ತವಾದರೆ, ಪ್ರಬುದ್ಧ ಪ್ರೇಕ್ಷಕರನ್ನು ಸಮಕಾಲೀನ ವ್ಯಾಖ್ಯಾನದೊಂದಿಗೆ ಚಿಂತನೆಗೆ ಹಚ್ಚುತ್ತವೆ.