"ಕರ್ನಾಟಕ ನಾಟಕಾಲಂಕಾರ"

ಗದಗ ಜಿಲ್ಲೆಯಲ್ಲಿ ಈ ಬಾರಿಯ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಸಂತಸದ ವಿಷಯ. ಈ ಸಂದರ್ಭದಲ್ಲಿ ಗದಗದಲ್ಲಿಯೇ ನೆಲೆಸಿ ಈ ನಾಡಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಾರಿಸಿದ ಸಾಹಿತಿಗಳು, ನಾಟಕಕಾರರು, ಕವಿಗಳಿಗೆ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ತಕ್ಕ ಗೌರವ ನೀಡುವುದು ನಮ್ಮೆಲ್ಲರ ಕರ್ತವ್ಯ.

ಅದೇ ರೀತಿಯಲ್ಲಿ ನಾಟಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ "ಕರ್ನಾಟಕ ನಾಟಕಾಲಂಕಾರ", "ಅಭಿನಯ ಕೇಸರಿ" ಶ್ರೀ ಸದಾಶಿವರಾವ್ ಗರುಡ ಅವರನ್ನು ಕೂಡ ಇದೇ ಸಂದರ್ಭದಲ್ಲಿ ಸ್ಮರಿಸಿಕೊಳ್ಳುವ ಮೂಲಕ ಹಾಗೂ ಅವರಿಗೆ ತಕ್ಕ ಗೌರವ ಸಲ್ಲಿಸುವ ಮೂಲಕ ಸಾಹಿತ್ಯ ಕ್ಷೇತ್ರವು ಅವರಿಗೆ ತಕ್ಕ ಮಾನ ನೀಡಬೇಕಾಗಿರುವುದು ಅಗತ್ಯವಾಗಿದೆ.

ಆದ್ದರಿಂದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಶ್ರೀ ಸದಾಶಿವರಾವ್ ಗರುಡ ಅವರ ಹೆಸರಿನಲ್ಲಿ ಒಂದು ವೇದಿಕೆ ಇಲ್ಲವೆ ಸ್ವಾಗತ ದ್ವಾರ ಅಥವಾ ಸ್ವಾಗತ ಕಮಾನು ನಿರ್ಮಿಸುವ ಮೂಲಕ ಅವರು ಕನ್ನಡ "ನಾಟಕ ಸಾಹಿತ್ಯ"ಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಬೇಕು. ಈ ವಿಷಯವನ್ನು ಸಂಘಟಕರು ಮರೆತರೆ ಅದು ಈ ಭಾಗದ ಮಹಾನ್ ನಾಟಕಕಾರ ಶ್ರೀ ಸದಾಶಿವರಾವ್ ಗರುಡ ಅವರ ಸಾಧನೆಯ ಸ್ಮರಣೆಯಲ್ಲಿ ದೊಡ್ಡ ಅಪಚಾರ ಮಾಡಿದಂತೆ ಆಗುತ್ತದೆ. ಈ ಕುರಿತು ಈಗಾಗಲೇ ಸಂಬಂಧಿಸಿದವರಿಗೆ ಮನವಿ ಪತ್ರವನ್ನು ಕಳುಹಿಸಲಾಗಿದೆ (ಪ್ರತಿಗಳನ್ನು ಈ ಪತ್ರಿಕಾ ಪ್ರಕಟಣೆಯ ಜೊತೆಗೆ ಲಗತ್ತಿಸಲಾಗಿದೆ).

ಈ ಕಾರಣಕ್ಕಾಗಿ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಕರು ಶ್ರೀ ಸದಾಶಿವರಾವ್ ಗರುಡ ಅವರ ಹೆಸರಿನಲ್ಲಿ ಒಂದು ವೇದಿಕೆ ಇಲ್ಲವೆ ಸ್ವಾಗತ ದ್ವಾರ ಅಥವಾ ಸ್ವಾಗತ ಕಮಾನು ನಿರ್ಮಿಸುವ ಕೆಲಸವನ್ನು ಮಾಡಬೇಕಾಗಿ ವಿನಂತಿ.

ನಮ್ಮ ವಿನಂತಿ:

"ಗರುಡ ನಾಟ್ಯ ಸಂಘ"ದ ನೂರಾರು ಕಲಾವಿದರ ಈ ಮನವಿಯನ್ನು ಪರಿಗಣಿಸಿ ಗದಗದಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ "ನಾಟಕಾಲಂಕಾರ" ಶ್ರೀ ಸದಾಶಿವರಾವ್ ಗರುಡ ಅವರ ಹೆಸರಲ್ಲಿ ಒಂದು ವೇದಿಕೆ ಇಲ್ಲವೆ ಸ್ವಾಗತ ಕಮಾನು ನಿಮರ್ಿಸುವ ಮೂಲಕ ನಾಟಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಈ ಮಹನಿಯರಿಗೆ ತಕ್ಕ ಗೌರವವನ್ನು ಸಲ್ಲಿಸಬೇಕಾಗಿ ಸಂಘಟಕರಲ್ಲಿ ವಿನಯಪೂರ್ವಕವಾದ ಪ್ರಾರ್ಥನೆ.

ಶ್ರೀ ಸದಾಶಿವರಾವ್ ಗರುಡ ಅವರ ಕಿರು ಪರಿಚಯ:

"ಕರ್ನಾಟಕ ನಾಟಕಾಲಂಕಾರ", "ಅಭಿನಯ ಕೇಸರಿ", "ನಾಟ್ಯಾಚಾರ್ಯ" ಹೀಗೆ ಹತ್ತು ಹಲವು ಬಿರುದಾವಳಿಗಳನ್ನು ಪಡೆದ ಶ್ರೀ ಸದಾಶಿವರಾವ್ ಗರುಡ ಅವರನ್ನು ಅಂದಿನ ಕಲಾ ಪ್ರಿಯರು "ಗರೂಡ ಸದಾಶಿವರಾಯರು" ಎಂದೇ ಕರೆಯುತ್ತಿದ್ದರು. ರಂಗಭೂಮಿಯು ಉಚ್ರಾಯ ಸ್ಥಿತಿಯಲ್ಲಿದ್ದ 1905ರಿಂದ 1940ರ ಅವಧಿಯಲ್ಲಿ ಬಂದ ವೃತ್ತಿನಿರತ ರಂಗಕರ್ಮಿಗಳು ಹಾಗೂ ನಾಟಕಕಾರರಲ್ಲಿ ಶ್ರೀ ಸದಾಶಿವರಾವ್ ಗರುಡ ಅವರದ್ದು ದೊಡ್ಡ ಹೆಸರು. ವೃತ್ತಿ ರಂಗಭೂಮಿಗೆ ಒಂದು ಶಿಸ್ತನ್ನು ತಂದುಕೊಟ್ಟ ಕೀರ್ತಿಯೂ ಶ್ರೀ ಸದಾಶಿವರಾವ್ ಗರುಡ ಅವರದ್ದು. ಈಗಲೂ ಅನೇಕ ಹವ್ಯಾಸಿ ರಂಗ ಕಲಾವಿದರು ಶ್ರೀ ಸದಾಶಿವರಾವ್ ಗರುಡ ಅವರ "ರಂಗಭೂಮಿ ಶಿಸ್ತು" ಪಾಲಿಸಿಕೊಂಡು ಹೋಗುತ್ತಿದ್ದಾರೆ.

"ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ" ಕಟ್ಟಿ ಬೆಳೆಸಿ, ಅದಕ್ಕಾಗಿ ನಾಟಕಗಳನ್ನು ಕೂಡ ಬರೆದು ಪ್ರದರ್ಶಿಸಿದ ಕೀರ್ತಿ ಶ್ರೀ ಸದಾಶಿವರಾವ್ ಗರುಡ ಅವರದ್ದು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಕೂಡ ಶ್ರೀ ಸದಾಶಿವರಾವ್ ಗರುಡ ಅವರ "ಸತ್ಯ ಸಂಕಲ್ಪ" ನಾಟಕವನ್ನು ನೋಡಿ ಮೆಚ್ಚಿಕೊಂಡಿದ್ದು ವಿಶೇಷ. ಶ್ರೀ ಸದಾಶಿವರಾವ್ ಗರುಡ ಅವರ "ಕಂಸವಧ", "ಕೃಷ್ಣಲೀಲಾ", ಲಂಕಾದಹನ" ಮುಂತಾದ ನಾಟಕಗಳು ಬ್ರಿಟಿಷ್ ಆಡಳಿತದ ವಿರುದ್ಧ ಪರೋಕ್ಷವಾಗಿ ಧ್ವನಿ ಎತ್ತಿದ್ದು ಗಮನ ಸೆಳೆದ ಅಂಶ. ಈ ನಾಟಕಗಳನ್ನು ಆಗ ನೋಡಿದ ಪ್ರೇಕ್ಷಕರು ಉತ್ಸಾಹದಿಂದ "ಜೈ ಭಾರತ ಮಾತಾ", "ಬ್ರಿಟಿಷರಿಗೆ ಧಿಕ್ಕಾರ"ಎಂದು ಘೋಷಣೆ ಕೂಗುತ್ತಿದ್ದರು ಎನ್ನುವುದನ್ನೂ ಸ್ಮರಿಸಬಹುದು.

ನಾಟಕ ಸಾಹಿತ್ಯಕ್ಕೆ ಶ್ರೀ ಸದಾಶಿವರಾವ್ ಗರುಡ ಅವರು ನೀಡಿದ ಕೊಡುಗೆಯೂ ಅಪಾರ. 50ಕ್ಕೂ ಹೆಚ್ಚು ನಾಟಕಗಳನ್ನು ಬರೆದು ರಂಗದ ಮೇಲೆ ಪ್ರದರ್ಶಿಸಿದ್ದರು. "ಶ್ರೀರಾಮ ಪಾದುಕಾ ಪಟ್ಟಾಭಿಷೇಕ", "ವಿಷಮ ವಿವಾಹ", "ಲಂಕಾ ದಹನ", "ಕಂಸವಧ", "ಚವತಿ ಚಂದ್ರ", ಮಾಯಾ ಬಜಾರ", "ಸತ್ಯ ಸಂಕಲ್ಪ", "ನಮ್ಮ ಭಾಗ್ಯೋದಯ", "ದುರಾತ್ಮ ರಾವಣ", "ಉಗ್ರ ಕಲ್ಯಾಣ", "ಶಕ್ತಿ ವಿಲಾಸ"...ಮುಂತಾದ ನಾಟಕಗಳು ಈಗಲೂ ಜನಮನದಲ್ಲಿ ಉಳಿದಿವೆ.

ಗರುಡ ನಾಟ್ಯ ಸಂಘ ಪರಿಚಯ:

ಶ್ರೀ ಸದಾಶಿವರಾವ್ ಗರುಡ ಅವರ ನೆನಪನ್ನು ಹಸಿರಾಗಿ ಉಳಿಸುವ ಉದ್ದೇಶದಿಂದ ಸ್ಥಾಪಿತವಾದ "ಗರುಡ ನಾಟ್ಯ ಸಂಘ"ವು ಉತ್ತರ ಕರ್ನಾಟಕ ಭಾಗದಲ್ಲಿ ಮಾತ್ರವಲ್ಲ; ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿಯೂ ನೂರಾರು ಹವ್ಯಾಸಿ ನಾಟಕ, ನೃತ್ಯ ಪ್ರದರ್ಶನಗಳನ್ನು ನೀಡಿದೆ. ಬೆಂಗಳೂರಿನಲ್ಲಿಯೂ ತನ್ನ ಕೇಂದ್ರವನ್ನು ಸ್ಥಾಪಿಸುವ ಮೂಲಕ "ಗರುಡ ನಾಟ್ಯ ಸಂಘ"ವು ತನ್ನ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದೆ. ಈಗ ಬೆಂಗಳೂರಿನಲ್ಲಿ ಚುರುಕಿನ ಚಟುವಟಿಕೆಗಳಿಂದ ಸಾಮಾಜಿಕ ವಿಷಯಗಳನ್ನು ಬಿಂಬಿಸುವ ನೃತ್ಯ, ನಾಟಕ ಹಾಗೂ ರೂಪಕಗಳನ್ನು ಪ್ರದರ್ಶಿಸುವ ಕೆಲಸವನ್ನು ಮಾಡುತ್ತಿದೆ. ಕಿರುತೆರೆ ಕಲಾವಿದೆಯೂ ಆಗಿರುವ ಶೋಭಾ ಎಂ.ಲೋಲನಾಥ್ ಅವರ ನೇತೃತ್ವದಲ್ಲಿ ರಂಗ ಹಾಗೂ ನೃತ್ಯ ಚಟುವಟಿಕೆಗಳ ಜೊತೆಗೆ, ಛಾಯಾಗ್ರಹಣ, ಚಿತ್ರಕಲೆ, ನೃತ್ಯಕಲೆಯನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಅಷ್ಟೇ ಅಲ್ಲ ವನ್ಯಜೀವಿಗಳ ರಕ್ಷಣೆಗಾಗಿ ನೃತ್ಯ ಚಳವಳಿ ಕೂಡ ನಡೆಸುಕೊಂಡು ಬರುತ್ತಿದೆ.

ಇಂಥದೊಂದು ಸಂಘವನ್ನು ಯುವಕರು ಕಟ್ಟುವಂತೆ ಪ್ರೇರಣೆ ನೀಡಿದ ಶ್ರೀ ಸದಾಶಿವರಾವ್ ಗರುಡ ಅವರಿಗೆ ಗದಗದಲ್ಲಿ ನಡೆಯುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ತಕ್ಕ ಗೌರವನ್ನು ಸಲ್ಲಿಸುವ ಸಕಾರಾತ್ಮಕವಾದ ಪ್ರಯತ್ನ ಮಾಡುವ ಮೂಲಕ ಗದುಗಿನ ನಾಟಕಕಾರರಾದ ಶ್ರೀ ಸದಾಶಿವರಾವ್ ಗರುಡ ಅವರು "ನಾಟಕ ಸಾಹಿತ್ಯ"ಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯವನ್ನು ಸಾಹಿತ್ಯ ಸಮ್ಮೇಳನದ ಸಂಘಟಕರು ಮಾಡುತ್ತಾರೆಂದು ನಾವು ವಿಶ್ವಾಸ ಹೊಂದಿದ್ದೇವೆ.